ನಿರ್ಜಲೀಕರಣ -
	ರಾಸಾಯನಿಕ ಸಂಯುಕ್ತದಲ್ಲಿರುವ ನೀರಿನ ಮೂಲಾಂಶಗಳನ್ನು (ಎಲಿಮೆಂಟ್ಸ್) ತೆಗೆಯುವ ಕ್ರಿಯೆ (ಡೀಹೈಡ್ರೇಶನ್). ರಾಸಾಯನಿಕ ಸಂಯುಕ್ತಗಳಲ್ಲಿ ನೀರು ಅವುಗಳ ಅಣುವಿನ ಒಂದು ಭಾಗವಾಗಿರುತ್ತದೆ ; ಇಲ್ಲವೇ ಹರಳುಗಳಲ್ಲಿ ನೀರು ಅಣುವಿನ ರೂಪದಲ್ಲಿ ದುರ್ಬಲ ಬಂಧಗಳ ಮೂಲಕ ಸೇರಿರುತ್ತದೆ. ಹರಳುಗಳಲ್ಲಿ ನೀರು ಮುಕ್ತ ಅಣುಗಳ ರೂಪದಲ್ಲೂ ಇರುವುದುಂಟು. ಇಂಥ ನೀರನ್ನು ಹೊರತೆಗೆಯುವ ಎರಡು ವಿಧಾನಗಳಿವೆ ; ನಿರ್ಜಲೀಕರಣ (ಡಿಹೈಡ್ರೇಷನ್), ಶುಷ್ಕೀಕರಣ (ಡೆಸಿಕೇಷನ್).

	ನಿರ್ಜಲೀಕರಣದಲ್ಲಿ ರಾಸಾಯನಿಕ ಹಾಗೂ ಭೌತ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ನಿರ್ಜಲೀಕರಣ ಎನ್ನುವುದಕ್ಕೆ ರಾಸಾಯನ ವಿಜ್ಞಾನದಲ್ಲಿ ವಿಶಿಷ್ಟ ಅರ್ಥವುಂಟು ; ವಸ್ತು ಅಥವಾ ಸಂಯುಕ್ತದಲ್ಲಿ ಇರಬಹುದಾದ ಜಲಾಂಶಕ್ಕೆ ಕಾರಣವಾದ ನೀರಿನ ಹೈಡ್ರೋಜನ್ ಮತ್ತು ಹೈಡ್ರಾಕ್ಸಿಲ್ ಪುಂಜಗಳು ಅಣು ರೂಪದಲ್ಲಿ ಬೇರ್ಪಟ್ಟು ವಸ್ತು ನಿರ್ಜಲವಾಗುವುದು. ಉದಾಹರಣೆಗೆ: ಆಲ್ಕೋಹಾಲಿನ ಒಂದು ಅಣು ನಿರ್ಜಲೀಕರಣಕ್ಕೆ ಒಳಗಾದಾಗ ಎಥಿಲೀನ್ ಲಭಿಸುತ್ತದೆ ; ಎರಡು ಅಣುಗಳು ನಿರ್ಜಲೀಕರಣಕ್ಕೆ ಒಳಗಾದಾಗ ಈಥೈಲ್ ಈಥರ್ ಉಂಟಾಗುತ್ತದೆ. 

ಚಿತ್ರ-1

	ರಸಾಯನವಿಜ್ಞಾನದಲ್ಲಿ ಕಂಡುಬರುವ ತಟಸ್ಥೀಕರಣ, ಎಸ್ಟರೀಕರಣ, ಈಥಲೀಕರಣ ಮುಂತಾದವೆಲ್ಲ ನಿರ್ಜಲೀಕರಣ ಕ್ರಿಯೆಗಳೇ. ಆದರೆ ಇಂಥ ಕ್ರಿಯೆಗಳಲ್ಲಿ ಭಾಗವಹಿಸುವ ವಿವಿಧ ಬಗೆಯ ಎರಡು ಸಂಯುಕ್ತಗಳು ಪರಸ್ಪರ ವರ್ತಿಸುವಾಗ, ಊ, ಔಊ ಪುಂಜಗಳು ಹೊರಬಂದು ನೀರಿನ ಅಣುಗಳಂತೆ ಕಾಣಿಸಿಕೊಳ್ಳುತ್ತವೆ. 

	ಆಹಾರ ಮತ್ತು ಮೇವುಗಳ ಸಂಸ್ಕರಣೆಯಲ್ಲಿ ನಿರ್ಜಲೀಕರಣ ತತ್ತ್ವವನ್ನು ಅನ್ವಯಿಸಲಾಗುತ್ತದೆ. ಆಹಾರಪದಾರ್ಥಗಳು ಕೆಡದ ಹಾಗೆ ಅವನ್ನು ಬಹಳಕಾಲ ಇಟ್ಟಿರಬೇಕಾದರೆ, ಅವು ಪೂರ್ಣವಾಗಿ ಒಣಗಿರಬೇಕಾದದ್ದು ಅಗತ್ಯ. ಆದರೆ, ಹೀಗೆ ಮೊಳಗಿಸುವ ವೇಳೆ ಅವನ್ನು ಅಧಿಕೋಷ್ಣತೆಗೆ ಗುರಿಪಡಿಸಿದ್ದಾದರೆ, ಆಗ ಅವುಗಳ ಗುಣ ಹಾಗೂ ರುಚಿ ಕೆಡುತ್ತದೆ. ಆದ್ದರಿಂದ ಆಧುನಿಕ ವಿಧಾನದಲ್ಲಿ ಅತಿ ಶೀತಲ ಹಾಗೂ ಅಧಿಕ ನಿರ್ವಾತ ಸ್ಥಿತಿಗಳಲ್ಲಿ ನೀರನ್ನು ಆವಿಯ ರೂಪದಲ್ಲಿ ಹೊರತೆಗೆಯಲಾಗುತ್ತದೆ. ಇಂಥ ವಿಧಾನವನ್ನು ಬಳಸಿ ಪಡೆಯವ ಪದಾರ್ಥಗಳಿಗೆ ಅಮುಲ್ ಹಾಲಿನ ಪುಡಿ ಒಂದು ನಿದರ್ಶನ.

	ವಸ್ತುವಿನಲ್ಲಿರುವ ನೀರಿನ ಮುಕ್ತ ಅಣುಗಳನ್ನು ಹೊರತೆಗೆಯಲು (ಅಂದರೆ, ಶುಷ್ಕೀಕರಿಸಲು) ನೀರನ್ನು ಹೀರಬಲ್ಲ ರಾಸಾಯನಿಕ ಸಂಯುಕ್ತಗಳನ್ನು ಬಳಸುತ್ತಾರೆ. ಉದಾಹರಣೆಗೆ ಸುಟ್ಟ ಸುಣ್ಣ, ಸಿಲಿಕ ಜೆಲ್, ಕ್ಯಾಲ್ಸಿಯಮ್ ಕ್ಲೋರೈಡ್, ಸಾರ ಸಲ್ಫೂರಿಕ್ ಆಮ್ಲ, ಶುಷ್ಕ ಮೆಗ್ಸೀಷಿಯಮ್ ಪರ್‍ಕ್ಲೋರೈಡ್ ಇವೆಲ್ಲ ಉತ್ತಮ ಶುಷ್ಕಹಾರಿ ಸಂಯುಕ್ತಗಳು. ಡೆಸಿಕೇಟರ್ (ಶುಷ್ಕೀಕರಣಕಾರಿ) ಎಂಬುದು ಪ್ರಯೋಗ ಶಾಲೆಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಶುಷ್ಕಗೊಳಿಸಲು ಬಳಸುವ ಸಾಧನ.
(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ